ಹಿಟೈಟರು
	ಕ್ರಿ.ಪೂ. 2000 ವರ್ಷಗಳ ಹಿಂದೆ ಏಷ್ಯಮೈನರ್ ಪ್ರಸ್ಥಭೂಮಿ ಪ್ರದೇಶದಲ್ಲಿ ನೆಲೆಸಿದ್ದ ಒಂದು ಜನವರ್ಗ. ಇವರ ಉತ್ಕರ್ಷಕಾಲ ಕ್ರಿ.ಪೂ. 1400 ರಿಂದ 1200. ಇವರು ಟಾರಸ್ ಪರ್ವತ ಶ್ರೇಣಿಯನ್ನು ದಾಟಿ, ದಕ್ಷಿಣದಲ್ಲಿ ಸಿರಿಯದ ಕೆಲವು ಪ್ರದೇಶಗಳನ್ನೂ ಪೂರ್ವದಲ್ಲಿ ಯೂಫ್ರಟೀಸ್ ನದೀಬಯಲಿನ ಕೆಲವು ಭಾಗಗಳನ್ನೂ ಸ್ವಾಧೀನಪಡಿಸಿಕೊಂಡರು. ಈಜಿಪ್ಟ್ ಮತ್ತು ಅಸ್ಸೀರಿಯ ರಾಜ್ಯಗಳೊಂದಿಗೆ ಇವರು ಕಾದಾಡುತ್ತಲೇ ಇದ್ದರು. ಹಟೂಸಾಸ್ ಇವರ ರಾಜಧಾನಿ (ಈಗಿನ ಹೆಸರು ಬೋಗಾನ್ ಕುಯೇ). ಇವರು ಲೋಹವಿದ್ಯೆಯ ನ್ನರಿತಿದ್ದರು. ಟಾರಸ್ ಪರ್ವತಗಳ ಗಣಿಯಿಂದ  ಬೆಳ್ಳಿಯನ್ನು ತೆಗೆದು ಉಪಯೋಗಿಸುತ್ತಿದ್ದರು. ಕಬ್ಬಿಣದ ಉಪಯೋಗವೂ ಇವರಿಗೆ ಚೆನ್ನಾಗಿ ತಿಳಿದಿತ್ತು. ಕಬ್ಬಿಣ ಬಳಸಿದ ಪ್ರಾಚೀನ ಜನವರ್ಗಗಗಳಲ್ಲಿ ಇವರೇ ಮೊದಲಿಗರು. ಬ್ಯಾಬಿಲೋನ್ ಹಾಗೂ ಅಸ್ಸೀರಿಯ ಜನರಿಗಿಂತ ಅನೇಕ ಶತಮಾನಗಳ ಹಿಂದೆಯೇ ಇವರು ಕುದುರೆ ಗಾಡಿಗಳನ್ನು ಉಪಯೋಗಿ ಸುತ್ತಿದ್ದರು. ಸರಕಾರ ಊಳಿಗಮಾನ್ಯ ಪದ್ಧತಿಗಳಿಗನುಸಾರವಾಗಿತ್ತು. ದೊರೆಗೆ ಆಡಳಿತ ವಿಷಯಗಳಲ್ಲಿ ಸಲಹೆ ನೀಡುವುದಕ್ಕೆ ರಾಜಸಂಬಂಧಿಗಳನ್ನೊಳಗೊಂಡ ಒಂದು ಸಮಿತಿಯಿತ್ತು. ಸಿಂಹಾಸನಕ್ಕೆ ಉತ್ತರಾಧಿಕಾರ ಮುಂತಾದ ಮುಖ್ಯ ರಾಜಕೀಯ ವಿಷಯಗಳಲ್ಲಿ ದೊರೆ ಈ ಸಮಿತಿಯ ಒಪ್ಪಿಗೆ ಪಡೆಯುವುದು ಅವಶ್ಯಕವಾಗಿತ್ತು. ಪ್ರಜೆಗಳ ರಕ್ಷಣೆಯ ಜವಾಬ್ದಾರಿ ರಾಜನದಾಗಿತ್ತು. ಯುದ್ಧಗಳಲ್ಲಿ ಇವನದೇ ನಾಯಕತ್ವ. ರಾಜ ನಿಷ್ಪಕ್ಷಪಾತ ದೃಷ್ಟಿಯಿಂದ ನ್ಯಾಯತೀರ್ಮಾನ ಮಾಡುತ್ತಿದ್ದ. ನಿರಂಕುಶಾಧಿಕಾರವಿರಲಿಲ್ಲ. ತನ್ನ ಜೀವಿತ ಕಾಲದಲ್ಲಿ ದೊರೆ ಸಾಮಾನ್ಯ ಜನರಂತೆಯೇ ಪರಿಗಣಿಸಲ್ಪಟ್ಟು, ಸತ್ತ ಮೇಲೆ ದೇವತೆಗಳ ಪಂಕ್ತಿಗೆ ಸೇರಿ ಗೌರವ ಪಡೆಯುತ್ತಿದ್ದ. ಯುದ್ಧದಲ್ಲಿ ಶತ್ರುಗಳನ್ನು ವಿನಾಕಾರಣ ಕೊಲ್ಲುತ್ತಿರಲಿಲ್ಲ, ಸೆರೆ ಸಿಕ್ಕಿದವರೆಲ್ಲ ಗುಲಾಮರಾಗುತ್ತಿದ್ದರು, ಅವರ ನೆಲೆಗಳನ್ನು ನಾಶಪಡಿಸಲಾಗುತ್ತಿತ್ತು. ಇವರಲ್ಲಿ ಷುಬ್ಬಿಲೂ ಮಾಸ್ ಎಂಬ ದೊರೆ ಪ್ರಸಿದ್ಧನಾಗಿದ್ದ. ಇವನು ಈಜಿಪ್ಟ್ ದೊರೆಗಳೊಂದಿಗೆ ಮೈತ್ರಿ ಬೆಳೆಸಿದ. ಅಖ್ನಾಟನ್ ಈಜಿಪ್ಟ್ ಸಿಂಹಾಸನಕ್ಕೆ ಬಂದಾಗ ಅವನಿಗೆ ಶುಭಾಶಯಗಳನ್ನು ಕೋರಿ ಬಹುಮಾನಗಳನ್ನು ಕಳುಹಿಸಿದ. ಆದರೆ ಆತನ ಮರಣಾನಂತರ ಈಜಿಪ್ಟ್‍ನೊಂದಿಗೆ ಯುದ್ಧಮಾಡುವ ಪ್ರಸಂಗ ಬಂದಿತು. ಹಿಟೈಟ್ ಸೈನ್ಯ ನೈಲ್‍ನದಿ ಮುಖಜ ಪ್ರದೇಶಕ್ಕೆ ನುಗ್ಗಿ ಈಜಿಪ್ಟ್ ಸೈನ್ಯವನ್ನು ಸೋಲಿಸಿತು. ಅಪಾರ ಸಂಪತ್ತನ್ನು ಕೊಳ್ಳೆ ಹೊಡೆಯಿತು. ಷುಬ್ಬಿಲೂ ಮಾಸ್‍ನ ಅನಂತರ ಆಳಿದ ದೊರೆಗಳು ಈಜಿಪ್ಟಿನೊಡನೆ ಆಗಾಗ ಯುದ್ಧಮಾಡುತ್ತಿದ್ದರು.

	ಫ್ರಿಜಿಯನ್ ಜನರ ಆಕ್ರಮಣಕ್ಕೆ ತುತ್ತಾಗಿ ಹಿಟೈಟ್ ರಾಜ್ಯ ನಾಶವಾಯಿತು. ಅಸ್ಸೀರಿಯದ ಎರಡನೆಯ ಸಾರ್ಗನ್ ದೊರೆಯು ಹಿಟೈಟ್ ಪಂಗಡವನ್ನು ಹೇಳಹೆಸರಿಲ್ಲದಂತೆ ಮಾಡಿದ. ಪಶ್ಚಿಮ ಏಷ್ಯದ ಚರಿತ್ರೆಯಲ್ಲಿ ಹಿಟೈಟ್ ಜನರಿಗೆ ಗಣನೀಯವಾದ ಸ್ಥಾನವಿದೆ. ಪೂರ್ವ ದಿಂದ ನುಗ್ಗಿಬರುತ್ತಿದ್ದ ಜನರ ದಾಳಿಯನ್ನು ತಡೆಗಟ್ಟಿ ಮೆಸಪೊಟೇಮಿಯ ಮತ್ತು ಸಿರಿಯ ನಾಗರಿಕತೆಗಳು ಬೆಳೆಯಲು ಸಹಾಯ ಮಾಡಿದರು. ಇವರಿಂದ ಈಜಿಪ್ಟ್ ರಾಜ್ಯ ಪೌರ್ವಾತ್ಯ ದೇಶಗಳಿಗೆ ಹರಡದಂತೆ ಆದದ್ದು, ಕಬ್ಬಿಣವನ್ನು ತಮ್ಮ ಗಣಿಗಳಿಂದ ಹೇರಳವಾಗಿ ಒದಗಿಸಿದ್ದೂ ಅಲ್ಲದೆ ಅದರ ಉಪಯೋಗವನ್ನೂ ಬೇರೆಯವರಿಗೆ ಹೇಳಿಕೊಟ್ಟದ್ದು ಇವರ ದೊಡ್ಡ ಸಾಧನೆ. ಇವರಿಂದ ಅಸ್ಸೀರಿಯನ್ನರು ಅನೇಕ ವಿಷಯಗಳನ್ನು ಕಲಿತರು.		
			
		(ಎ.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ